ಯೋಗದಿಂದ ವರ್ಟಿಗೊಅನ್ನು ನಿವಾರಿಸುವುದು ಹೇಗೆಂದು ತಿಳಿಯಿರಿ ವರ್ಟಿಗೊ ಎಂದರೇನು?

ವರ್ಟಿಗೊ ಎಂದರೇನು?

ವರ್ಟಿಗೊ ಎಂದರೆ ತಲೆಸುತ್ತುವಿಕೆಯ ಲಕ್ಷಣದೊಡನೆ, ಮೆದುಳಿನಲ್ಲಿ ಸಮತೋಲನದ ಅಲ್ಲೋಲಕಲ್ಲೋಲತೆಯಿಂದಾಗಿ ಆಯ ತಪ್ಪುವ ಭಾವನೆ ಉಂಟಾಗುತ್ತದೆ. ಚಲನೆವಲನೆಯ ದಿಕ್ಕನ್ನು ನಿಭಾಯಿಸುವ ಒಳಗಿನ ಕಿವಿಯನ್ನು ಇದು ಬಾಧಿಸುತ್ತದೆ. ವೈರಸ್, ಕ್ಯಾಲ್ಸಿಯಂ ಅಥವಾ ದ್ರವ್ಯದ ಹೆಚ್ಚಳಿಕೆಯಿಂದ ಒಳಗಿನ ಕಿವಿ ಬಾಧಿತವಾಗುತ್ತದೆ. ಕೆಲವು ನಿರ್ದಿಷ್ಟವಾದ ಯೋಗಾಸನಗಳನ್ನು ಮಾಡುವುದರಿಂದ ದೇಹದ ಸಮತೋಲನ ಮರಳಿ ಬರುತ್ತದೆ ಮತ್ತು ನರವ್ಯವಸ್ಥೆ ಪ್ರಚೋದಿತವಾಗುತ್ತದೆ. ಇದರಿಂದ ವರ್ಟಿಗೊಅನ್ನು ಸಂಪೂರ್ಣವಾಗಿ ನಿವಾರಿಸಬಹುದೆಂದು ಎಂದು ಇತ್ತೀಚೆಗೆ ಸಾಬೀತು ಪಡಿಸಲಾಗಿದೆ.

ಕಾರಣ ಮತ್ತು ರೋಗದ ಲಕ್ಷಣಗಳು

ವರ್ಟಿಗೊ ಅಥವಾ ತಲೆಸುತ್ತುವಿಕೆಯು, ಒಳಗಿನ ಕಿವಿಗೆ ಸಾಕಷ್ಟು ರಕ್ತ ಸಿಗದಿದ್ದಾಗ ಉಂಟಾಗುತ್ತದೆ. ಸಾಮಾನ್ಯ ನೆಗಡಿ ಅಥವಾ ಫ್ಲೂ ಜ್ವರ ಉಂಟು ಮಾಡುವ ವೈರಸ್ ಒಳಗಿನ ಕಿವಿಯ ಮೇಲೆ ಮತ್ತು ಮೆದುಳಿನೊಡನೆ ಅದು ಸಂಬಂಧಪಡುವ ನರಗಳ ಮೇಲೆ ದಾಳಿ ಮಾಡಿದಾಗ ಉಂಟಾಗುತ್ತದೆ. ಇದರಿಂದ ವಿಪರೀತ ತಲೆಸುತ್ತುವಿಕೆ ಅಥವಾ ವರ್ಟಿಗೊ ಉಂಟಾಗುತ್ತದೆ. ತಲೆಯ ಬುರುಡೆಗೆ ಹಾನಿ ಅಥವಾ ಪೆಟ್ಟಾದಾಗ ವಿಪರೀತ ತಲೆಸುತ್ತುವಿಕೆಯೊಡನೆ ವಾಕರಿಕೆ ಮತ್ತು ಕಿವುಡು ಉಂಟಾಗುತ್ತದೆ. ಕೆಲವು ಆಹಾರ ಪದಾರ್ಥಗಳು ಅಥವಾ ಗಾಳಿಯಲ್ಲಿ ತೇಲಿ ಬರುವ ಪದಾರ್ಥಗಳಾದ ಧೂಳು, ಪಶುಗಳ ಪ್ರಾಣಿಗಳ ಕೂದಲು, ಸಣ್ಣ ಜೀವಿಗಳು, ಕೀಟಾಣುಗಳು, ಪರಾಗ, ಇತ್ಯಾದಿಗಳಿಗೆ ಅಲರ್ಜಿ ಉಂಟಾದರೂ ಸಹ ಈ ಲಕ್ಷಣ ಉಂಟಾಗುತ್ತದೆ.

ಮಲ್ಟಿಪಲ್ ಸ್ಕ್ಲೀರೋಸಿಸ್, ಸಿಫಿಲಿಸ್, ಟ್ಯೂಮರ್, ಇತ್ಯಾದಿ ಪರಿಸ್ಥಿತಿಗಳಿಂದಲೂ ಸಮತೋಲನ ತಪ್ಪಬಹುದು.

ವರ್ಟಿಗೊ ಚಿಕಿತ್ಸೆಯಲ್ಲಿ ಯೋಗಾಸನಗಳು ಏಕೆ ಉಪಯುಕ್ತವಾಗುತ್ತವೆ?

ನರವ್ಯವಸ್ಥೆಯನ್ನು ಮತ್ತು ಒಳಗಿನ ಕಿವಿಯ ಸಮತೋಲನ ಕೇಂದ್ರವನ್ನು ಸಕ್ರಿಯಗೊಳಿಸುವಂತಹ ಮತ್ತು ಏಕಾಗ್ರತೆ ಹಾಗೂ ಗಮನವನ್ನು ಹೆಚ್ಚಿಸುವಂತಹ ಯೋಗಾಸನಗಳನ್ನು ಆಯ್ಕೆ ಮಾಡಲಾಗಿವೆ. ಈ ಆಸನಗಳು ಸಿಂಪಥೆಟಿಕ್  ನರವ್ಯವಸ್ಥೆಯ ಮೇಲೆ ನೇರ ಪ್ರಭಾವವನ್ನು ಉಂಟು ಮಾಡುವುದಲ್ಲದೆ ತಲೆಗೆ ಮತ್ತು ದೇಹದ ಇತರ ಭಾಗಗಳಿಗೆ ರಕ್ತಚಲನೆ ಹೆಚ್ಚಿಸುತ್ತವೆ. ಮೆದುಳಿನ ಕೋಶಗಳಿಗೆ ಆರೋಗ್ಯಕರವಾದ , ಶುದ್ಧ ರಕ್ತ ಹರಿತದಿಂದ ವರ್ಟಿಗೊ ಗುಣಮುಖವಾಗುತ್ತದೆ. 

ನರವ್ಯವಸ್ಥೆಗಳನ್ನು ಪ್ರಚೋದಿಸುವ , ಮೆದುಳಿಗೆ ಹೋಗುವ ರಕ್ತವನ್ನು ಶುದ್ಧೀಕರಿಸುವಂತಹ ಯೋಗಾಸನಗಳೇ ಸೂಕ್ತ.  

1. ಷಣ್ಮುಖಿ ಮುದ್ರ

2. ನಾಡಿಶೋಧನ ಪ್ರಾಣಾಯಾಮ

3. ಸಲಂಬ ಶಿರಸಾಸನ

4. ಹಲಾಸನ

5. ಪಶ್ಚಿಮೋತ್ತಾಸನ

6. ಶವಾಸನ

1. ಷಣ್ಮುಖಿ ಮುದ್ರ

ಇದರ ಅಭ್ಯಾಸದಿಂದ ಮೆದುಳು ಪ್ರಶಾಂತವಾಗುತ್ತದೆ ಮತ್ತು ಆತಂಕವನ್ನು ಕುಗ್ಗಿಸಬಹುದು ಮತ್ತು ಆತಂಕವನ್ನು ತಡೆಗಟ್ಟಲೂಬಹುದು. ಕಣ್ಣುಗಳನ್ನು ಮತ್ತು ಮುಖದ ನರಗಳನ್ನು ಮತ್ತು ಮುಖದ ಸ್ನಾಯುಗಳನ್ನು ಇದು ವಿಶ್ರಮಿಸಿ, ಪುನಶ್ಚೇತಗೊಳಿಸುತ್ತದೆ.

2. ನಾಡಿಶೋಧನ ಪ್ರಾಣಾಯಾಮ

ಈ ಪ್ರಾಣಾಯಾಮದಿಂದ ರಕ್ತದ ಹಾಗೂ ಶ್ವಾಸಕೋಶಗಳ ಶುದ್ಧೀಕರಣವಾಗುತ್ತದೆ. ಆಳವಾದ ಉಸಿರಾಟದಿಂದ ರಕ್ತದಲ್ಲಿ ಆಮ್ಲಜನಕವು ಹೆಚ್ಚಾಗಿ ತುಂಬುತ್ತದೆ, ಶ್ವಾಸಕೋಶಗಳು ಬಲಿಷ್ಠವಾಗುತ್ತವೆ ಮತ್ತು ನರವ್ಯವಸ್ಥೆಯ ಸಮತೋಲನವೂ ಉಂಟಾಗುತ್ತದೆ.

3. ಸಲಂಬ ಶೀರ್ಸಾಸನ

ಗುರುತ್ವಾಕರ್ಷಣೆಗೆ ವಿರುದ್ಧವಾದ ಶಕ್ತಿಯನ್ನು ಸಾವಯವಗಳ ಮೇಲೆ ಈ ಬೀರುವ ಈ ಆಸನವು, ಖಲಿಜ, ಮೂತ್ರಪಿಂಡ, ಹೊಟ್ಟೆ, ದೊಡ್ಡ ಕರುಳು ಮತ್ತು ಜನನೇಂದ್ರಿಯಗಳ ಸಮಸ್ಯೆಯನ್ನು ನಿವಾರಿಸಲು ಸಹಾಯಕವಾಗುತ್ತದೆ. ವರ್ಟಿಗೊ ಸಮಸ್ಯೆಯನ್ನು ಇದು ನಿವಾರಿಸುವುದಲ್ಲದೆ, ಇದರ ಅಭ್ಯಾಸವನ್ನು ಮುಂದುವರಿಸುವುದರಿಂದ ಪಿಟ್ಯೂಟರಿ ಮತ್ತು ಪೀನಿಯಲ್ ಗ್ರಂಥಿಯನ್ನು ಪ್ರಚೋದಿಸಿ ಬೆಳವಣಿಗೆಯಲ್ಲಿ ಸಹಾಯ ಕವಾಗುವುದಲ್ಲದೆ, ಸೆಕ್ಸ್ ಹಾರ್ಮೋನುಗಳ ಸರಿಯಾದ ಉತ್ಪಾದನೆಗೂ ಕಾರಣವಾಗುತ್ತದೆ.

4. ಹಲಾಸನ

ಹಲಾಸನವು ಕತ್ತನ್ನು, ಭುಜಗಳನ್ನು, ಹೊಟ್ಟೆಯ ಸ್ನಾಯುಗಳನ್ನು, ಬೆನ್ನಿನ ಸ್ನಾಯುಗಳನ್ನು ತೆರೆದು ಬಲಪಡಿಸುತ್ತದೆ. ನರವ್ಯವಸ್ಥೆಯನ್ನೂ ಈ ಆಸನವು ಪ್ರಶಾಂತವಾಗಿಸುವುದಲ್ಲದೆ, ಒತ್ತಡ ವನ್ನು ಕುಗ್ಗಿಸುತ್ತದೆ  ಮತ್ತು ಥೈರಾಯ್ಡ್ ಗ್ರಂಥಿಯನ್ನೂ ಪ್ರಚೋದಿಸುತ್ತದೆ. ಋತುಬಂಧದ ಸ್ಥಿತಿಯಲ್ಲಿರುವ ಮಹಿಳೆಯರಿಗೂ ಇದು ಸಹಾಯ ಕಾರಿ. 

5. ಪಶ್ಚಿಮೋತ್ತಾನಾಸನ

ಈ ಯೋಗಾಸನವು ಒತ್ತಡವನ್ನು ನಿವಾರಿಸುವುದಲ್ಲದೆ, ಆತಂಕ, ಕೋಪ ಮತ್ತು ಕಿರಿಕಿರಿಯನ್ನೂ ತೆಗೆದುಹಾಕುತ್ತದೆ. ಋತುಚಕ್ರ ಗಳಲ್ಲಿ ಸಮತೋಲನವನ್ನು ತರುತ್ತದೆ. ವಿಶೇಷ ವಾಗಿ ಹೆರಿಗೆಯಾಗಿರುವ ಮಹಿಳೆಯರಿಗೆಇದು ಬಹಳ ಒಳ್ಳೆಯದು.

6. ಶವಾಸನ

ಈ ಭಂಗಿಯಿಂದ ಆಳವಾದ ವಿಶ್ರಾಂತಿಯ, ಧ್ಯಾನಸ್ಥವಾದ ಸ್ಥಿತಿಗೆ ಹೊಕ್ಕಬಹುದು. ಇದರಿಂದ ಕೋಶಗಳ ದುರಸ್ತಿಯಾಗುತ್ತದೆ ಮತ್ತು ಒತ್ತಡದ ನಿವಾರಣೆಯೂ ಆಗುತ್ತದೆ. ರಕ್ತದೊತ್ತಡ, ಆತಂಕ ಮತ್ತು ನಿದ್ರಾಹೀನತೆಯನ್ನೂ ಇದು ನಿವಾರಿಸುತ್ತದೆ. 

ಮಾಡಬಾರದ ಭಂಗಿಗಳು

ತಲೆಸುತ್ತುವಿಕೆಯಿಂದ ಬಳಲುತ್ತಿರುವವರಿಗೆ ನೀಡಲಾಗುವ ಸಾಮಾನ್ಯವಾದ ಸೂಚನೆ ಯೆಂದರೆ, ದಿಢೀರಾಗಿ ಮುಂದಕ್ಕೆ ಬಗ್ಗಬಾರದು. ಯೋಗಾಸನಗಳನ್ನು ಮಾಡುವಾಗ, ಮುಂದಕ್ಕೆ ಬಗ್ಗುವ ಆಸನಗಳನ್ನು ಮಾಡಬಾರದು. ಅದಲ್ಲದೆ, ವರ್ಟಿಗೊದಿಂದ ಬಳಲುತ್ತಿರುವವರು ಯೋಗಾಸನಗಳನ್ನು ನಿಧಾನವಾಗಿ ಮಾಡಬೇಕು. 

ಕೊನೆಯದಾಗಿ, ವರ್ಟಿಗೊಅನ್ನು ನಿವಾರಿಸಲು ಆರೋಗ್ಯ ಕರವಾದ , ಶುದ್ಧವಾದ ರಕ್ತದ ಹರಿತವು ಮೆದುಳಿನ ಕೋಶಗಳಿಗೆ ಅತ್ಯಾವಶ್ಯಕ. ನರವ್ಯವಸ್ಥೆ ಯನ್ನು ಪ್ರಚೋದಿಸುವ ಮತ್ತು ಮೆದುಳಿಗೆ ಹೋಗುವ ರಕ್ತವನ್ನು  ಶುದ್ಧೀಕರಿಸುವ ವ್ಯಾಯಾಮವೇ ಇದಕ್ಕೆ ಉತ್ತಮವಾದ ಚಿಕಿತ್ಸೆ.